ನಟೂಫಿಯನ್, ಸಂಸ್ಕøತಿ - 
ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿದ್ದಂಥ ಒಂದು ಸಂಸ್ಕøತಿ. ಪ್ಯಾಲೆಸ್ಟೈನಿನ ವಾಡಿ ಎನ್.ನಾಟೂಫ್ ಎಂಬ ಸ್ಥಳದ ಹೆಸರಿನಿಂದ ಇದಕ್ಕೆ ಈ ಹೆಸರು. ಅಂತಿಮ ಹಿಮಯುಗ ಮುಕ್ತಾಯವಾದ ಅನಂತರ ಈ ಸಂಸ್ಕøತಿ ಪ್ರಾರಂಭವಾಯಿತೆನ್ನಲಾಗಿದೆ. ಸಿರಿಯ, ಲೆಬನಾನ್, ಪ್ಯಾಲೆಸ್ಟೈನ್ ಮುಂತಾದ ಪ್ರದೇಶಗಳಿಂದ ಈ ಸಂಸ್ಕøತಿ ಕೆಳಗಿನ ಈಜಿಪ್ಟ್‍ವರೆಗೂ ಹರಡಿತ್ತು.

ನಟೂಫಿಯನ್ನರು ಮೆಡಿಟರೇನಿಯನ್ ಬುಡಕಟ್ಟಿಗೆ ಸೇರಿದ ಜನ. ಇವರನ್ನು ಸೆಮಿಟೊಹ್ಯಾಮಿಟಿಕ್ ಜನಾಂಗ ಎಂದು ಕರೆಯುವುದುಂಟು. ಸುಮಾರು 5'ಗಿಂತ ಹೆಚ್ಚು ಎತ್ತರವಾಗಿದ್ದ ಈ ಜನರ ಶರೀರ ತೆಳುವಾಗಿತ್ತು. ಮತ್ತು ತಲೆ ಉದ್ದವಾಗಿತ್ತು. ಸಾಮಾನ್ಯವಾಗಿ ಗುಹಾವಾಸಿಗಳಾಗಿದ್ದ ಇವರು ಚಕಮಕಿ ಕಲ್ಲುಗಳಿಂದ ಮಾಡಿದ ಸೂಕ್ಷ್ಮವಾದ ಅಲಗು, ಚೂಪು ಮತ್ತು ಬಾಲಚಂದ್ರಾಕೃತಿಯ ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಕೊರೆಯುಳಿಯ ಬಳಕೆ ಇವರಿಗೆ ಗೊತ್ತಿತ್ತು. ಇವರು ಉಪಯೋಗಿಸುತ್ತಿದ್ದ ಸೂಕ್ಷ್ಮ ಆಯುಧಗಳಲ್ಲಿ ಕುಡುಗೋಲಿನ ಆಕಾರದ ಅಲಗುಗಳು ಪ್ರಧಾನವಾದುವು. ಬೇಟೆಗೆ ಇವರು ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರಲ್ಲದೆ ಏಷ್ಯಖಂಡದ ತೋಳ ಜಾತಿಗೆ ಸೇರಿದ ನಾಯಿಯನ್ನೂ ಪಳಗಿಸುತ್ತಿದ್ದರು. ಮೀನುಗಳನ್ನು ಹಿಡಿಯಲು ಮೂಳೆಯಿಂದ ಮಾಡಿದ ಗಾಳಗಳನ್ನು ಬಳಸುತ್ತಿದ್ದರು. ಅಲ್ಪಸ್ವಲ್ಪ ವ್ಯವಸಾಯ ಮಾಡುತ್ತಿದ್ದರಾದರೂ ಪ್ರಧಾನವಾಗಿ ಮೀನುಗಾರಿಕೆ ಮತ್ತು ಬೇಟೆಯಿಂದಲೇ ಜೀವನ ನಡೆಸುತ್ತಿದ್ದರು. ಮೂಳೆಗಳಿಂದ ದಬ್ಬಳ ಪದಕ ಮತ್ತು ಗುಂಡುಸೂಜಿಗಳನ್ನು ಇವರು ತಯಾರಿಸುತ್ತಿದ್ದರು.

ಈ ಜನರ ಗುಹಾಕಲೆ ಯೂರೋಪಿನ ಮೆಗ್ಡಲೀನಿಯನ್ ಕಲೆಯನ್ನು ಹೋಲುತ್ತದೆ. ಚಿಪ್ಪು, ಮೃಗಗಳ ಹಲ್ಲು ಮತ್ತು ಮೂಳೆಗಳಿಂದ ನಿರ್ಮಿಸಿದ ಆಭರಣಗಳನ್ನು ಇವರು ಧರಿಸುತ್ತಿದ್ದರು. ಇವರು ಹೆಣ ಹೂಳಿರುವುದನ್ನು ನೋಡಿದರೆ ಈ ಜನ ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ವಾಸಿಸುತ್ತಿದ್ದರು ಅಥವಾ ಹೆಚ್ಚು ಜನರು ಸ್ವಲ್ಪವೇ ಸಮಯ ಇರುತ್ತಿದ್ದರು ಎಂದು ಹೇಳಬಹುದು. ಸತ್ತವರಿಗೆ ಕಲ್ಲಿನ ನೆಲ ಮತ್ತು ಗೋಡೆಯುಳ್ಳ ವೃತ್ತಾಕಾರದ ಗೋರಿಗಳನ್ನು ನಿರ್ಮಿಸುತ್ತಿದ್ದರು. ಕ್ರಿ.ಪೂ. ಸುಮಾರು 8 ಸಾವಿರ ವರ್ಷಗಳ ಹಿಂದೆಯೇ ಇವರು ಕಾಡು ಜಾತಿಯ ಬಾರ್ಲಿ ಮತ್ತು ಇನ್ನಿತರ ಧಾನ್ಯಗಳನ್ನು ಬೆಳೆಯುತ್ತಿದ್ದರು. ಕಲ್ಲಿನ ಸೂಕ್ಷ್ಮ ಅಲಗುಗಳನ್ನು ಮೂಳೆಗೆ ಸಿಕ್ಕಿಸಿ ಬೆಳೆಯನ್ನು ಕೊಯ್ಯಲು ಕುಡುಗೋಲಾಗಿ ಬಳಸುತ್ತಿದ್ದರು. ಧಾನ್ಯವನ್ನು ಕುಟ್ಟಲು ಕಲ್ಲಿನ ಒನಕೆ ಮತ್ತು ಒರಳುಗಳನ್ನು ಉಪಯೋಗಿಸುತ್ತಿದ್ದರು. ಆದಿಕಾಲದ ನಟೂಫಿಯನರು ಗೆಡ್ಡೆ ಗೆಣಸು, ಮಾಂಸ ಮತ್ತು ಮೀನುಗಳನ್ನು ತಿನ್ನುತ್ತಿದ್ದರು. ಅನಂತರ ವ್ಯವಸಾಯವನ್ನು ಕಲಿತುಕೊಂಡರು. ಕುಡುಗೋಲಿನ ಹಿಡಿ ಮತ್ತು ಕಲ್ಲಿನ ಒನಕೆಗಳ ಮೇಲೆ ವನ್ಯಪ್ರಾಣಿಗಳ ತಲೆ ಮತ್ತು ಗೊರಸಿನ ಚಿತ್ರಗಳಿರುವುದನ್ನು ನೋಡಿದರೆ ಈ ಜನ ಬೇಟೆಗೆ ಎಷ್ಟು ಪ್ರಾಧಾನ್ಯವಿತ್ತಿದ್ದರು ಎಂಬುದು ತಿಳಿಯುತ್ತದೆ.

ಈ ಸಂಸ್ಕøತಿಯ ಕೊನೆಯ ಹಂತದಲ್ಲಿ ಈ ಜನ ದೊಡ್ಡ ದೊಡ್ಡ ನೆಲೆಗಳಲ್ಲಿ ವಾಸಿಸುತ್ತಿದ್ದರು. ಇಂಥ ನೆಲೆಗಳಿಗೆ ಕಲ್ಲಿನ ರಕ್ಷಣಾ ಗೋಡೆಗಳನ್ನು ಮತ್ತು ಗೋಪುರಗಳನ್ನು ಕಟ್ಟುತ್ತಿದ್ದರು. ಕ್ರಿ.ಪೂ. ಸುಮಾರು 7 ಸಾವಿರ ವರ್ಷಗಳ ಹಿಂದೆಯೇ ಇವರು ಆಡುಗಳನ್ನು ಸಾಕುತ್ತಿದ್ದರೆಂದು ಗೊತ್ತಾಗಿದೆ.							(ಕೆ.ಕೆ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ